ಶೇಷಾದ್ರಿ ಅಯ್ಯರ್, ಕೆ
	1845-1901. ಮೈಸೂರು ಸಂಸ್ಥಾನದ ದಿವಾನರು (1883-1900). ಕೇರಳದ ಪಾಲ್‍ಘಾಟ್ ಜಿಲ್ಲೆಯಲ್ಲಿ 1845ರಲ್ಲಿ ಜನಿಸಿದ ಇವರು ಅಲ್ಲಿಯೇ ವಿದ್ಯಾಭ್ಯಾಸ ಮಾಡಿ ಬಿ.ಎ. ಪದವೀಧರರಾಗಿ (1865) ಅನಂತರ ಕಲ್ಲಿಕೋಟೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭಾಷಾಂತರಕಾರರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಆಗ ಅಲ್ಲಿ ಅಧಿಕಾರಿಯಾಗಿದ್ದ ರಂಗಾಚಾರ್ಲು ಅವರು ಮೈಸೂರು ಸಂಸ್ಥಾನದಲ್ಲಿ ಅಧಿಕಾರ ವಹಿಸಿಕೊಂಡಾಗ, ಇವರನ್ನೂ ಮೈಸೂರಿಗೆ ಕರೆಸಿಕೊಂಡರು. ಇವರು 1868ರಲ್ಲಿ ಮೈಸೂರು ಸಂಸ್ಥಾನದ ಅಷ್ಟಗ್ರಾಮ ವಿಭಾಗದ ಸೂಪರಿಂಟೆಂಡಂಟರ ಕಛೇರಿಯಲ್ಲಿ ನ್ಯಾಯಾಂಗ ಶಿರಸ್ತೇದಾರ ರಾದರು. ಅನಂತರ ರಾಜ್ಯದ ಆಡಳಿತದಲ್ಲಿನ ನಾನಾ ಹಂತಗಳಲ್ಲಿ ಸೇವೆಸಲ್ಲಿಸಿ 1879ರಲ್ಲಿ ತುಮಕೂರಿನಲ್ಲಿ ಜಿಲ್ಲಾಧಿಕಾರಿಗಳಾದರು. ರಂಗಾಚಾರ್ಲು ಅವರು ದಿವಾನರಾಗಿ ನೇಮಿತರಾದ ಮೇಲೆ ಆ ಹೊತ್ತಿಗೆ ಬಿ.ಎಲ್.ಪದವಿಯನ್ನೂ ಪಡೆದಿದ್ದ ಇವರನ್ನು ತಮ್ಮ ಸ್ವಂತ ಕಛೇರಿಗೆ ಸೇರಿಸಿಕೊಂಡರು. ದಿವಾನ್ ರಂಗಾಚಾರ್ಲು ಅವರು ಪ್ರವಾಸ ಇತ್ಯಾದಿಗ ಳಿಗೆ ಬೆಂಗಳೂರಿನಿಂದ ಹೊರಗಿದ್ದಾಗ ಇವರೇ ಅವರ ಕಾರ್ಯಕ್ರಮವನ್ನು ನಡೆಸುತ್ತಿದ್ದು ಆಡಳಿತದಲ್ಲಿ ಅಪಾರ ಅನುಭವಗಳಿಸಿದರು. ರಂಗಾಚಾರ್ಲು ಅವರ ನಿಧನಾನಂತರ (1883) ದಿವಾನ ಪದವಿ ಇವರಿಗೆ ಲಭಿಸಿತು. 

	ಆಧುನಿಕ ಮೈಸೂರಿನ ಇತಿಹಾಸದಲ್ಲಿ ದೀರ್ಘಕಾಲ ವೆನಿಸಿದ ಅವಧಿಯಲ್ಲಿ ದಿವಾ ನರಾಗಿದ್ದ ಇವರ ಸಾಧನೆ ಗಳು ಅನೇಕ. ಇವರು ರಾಜ್ಯದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಹಲವಾರು ಕ್ರಮಗಳನ್ನು ಕೈಗೊಂಡರು. ರಾಜ್ಯದ ಆದಾಯವನ್ನು ಹೆಚ್ಚಿಸಲು, ಹಲವಾರು ಹೆದ್ದಾರಿಗಳ ನಿರ್ಮಾಣ ಕಾರ್ಯ, ಬೆಂಗಳೂರಿನಿಂದ ಹರಿಹರದವರೆಗೆ (1889) ಮತ್ತು ಹಿಂದೂಪುರದವರೆಗೆ (1893) ರೈಲ್ವೆ ಮಾರ್ಗದ ವಿಸ್ತರಣೆ. ಮುಖ್ಯವೆನಿಸಿದ ನೀರಾವರಿ ಕಾರ್ಯಗಳ ಪೂರೈಕೆ ಮತ್ತು ಕೈಗಾರಿಕೆಗಳ ಸ್ಥಾಪನೆಯನ್ನು ತ್ವರಿತಗೊಳಿಸಿದರು. ಭೂಕಂದಾಯದ ವಸೂಲಿಯಲ್ಲಿ ವಿಚಕ್ಷಣೆ ತೋರಿಸಿ, ಆದಾಯವನ್ನು ಹೆಚ್ಚಿಸಿದರು. ರಾಜ್ಯದ ಪ್ರಮುಖ ಕೈಗಾರಿಕೆಯಾದ ಚಿನ್ನದ ಗಣಿಯ ಉದ್ಯಮಕ್ಕೆ ಉತ್ತೇಜನ ಕೊಟ್ಟು, ಅದರಿಂದ ಸಂಸ್ಥಾನದ ಖಜಾನೆಗೆ ಸುಮಾರು 7 1/2 ಲಕ್ಷ ರೂಪಾಯಿ ಆದಾಯ ಬರುವಂತೆ ಮಾಡಿದರು. ರಾಜ್ಯದ ಭೂವಿಜ್ಞಾನ ಸಮೀಕ್ಷೆಯನ್ನು ನಡೆಸುವ ಏರ್ಪಾಡಾದದ್ದು ಇವರ ಕಾಲದಲ್ಲಿ. ಇವರ ಒತ್ತಾಯದ ಪರಿಣಾಮವಾಗಿ ರಾಜ್ಯ ಭಾರತ ಸರ್ಕಾರಕ್ಕೆ ಕೊಡಬೇಕಾಗಿದ್ದ ಪೊಗದಿಯ ಹೆಚ್ಚಳವನ್ನು ತಡೆಹಿಡಿಯಲಾಯಿತು. ಅರಣ್ಯ ಆದಾಯವನ್ನು ಹೆಚ್ಚಿಸಲು ಕಾಫಿ ಮತ್ತು ಇತರ ಪ್ಲಾಂಟೇಷನ್‍ಗಳನ್ನು ವಿಸ್ತರಿಸಲಾಯಿತು. ಸ್ಥಳೀಯ ಸಂಸ್ಥೆಗಳ ಚಟುವಟಿಕೆಗಳಲ್ಲಿ ಪ್ರಜೆಗಳು ಪಾಲುಗೊಳ್ಳುವಂತೆ ಏರ್ಪಾಡು ಮಾಡಿ, ರಾಜ್ಯದಲ್ಲಿ ಮೊದಲ ಬಾರಿಗೆ ತಾಲ್ಲೂಕು ಬೋರ್ಡುಗಳನ್ನು 1884ರಲ್ಲಿ ಸ್ಥಾಪಿಸಲಾಯಿತು. ಸರ್ಕಾರಿ ನೌಕರರ ಹಿತರಕ್ಷಣೆಗಾಗಿ ಜೀವವಿಮಾ ಯೋಜನೆಯನ್ನು ರೂಪಿಸಿ ಅದನ್ನು ಸಾರ್ವಜನಿಕರ ಸೇವೆಗಾಗಿ ವಿಸ್ತರಿಸಿದರು. ರಾಜ್ಯದ ಪ್ರಾಚೀನ ಶಾಸನಗಳನ್ನು ಪರಿಶೀಲಿಸಿ, ಪ್ರಕಟಿಸುವ ಸಲುವಾಗಿ, ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯನ್ನು ಸುಧಾರಿಸಿ ವಿದ್ವಾಂಸರಾದ ರೈಸ್ ಅವರ ನೇತೃತ್ವದಲ್ಲಿ ಆ ಕೆಲಸ ನಡೆಯುವಂತೆ ಏರ್ಪಾಡುಮಾಡಿದರು. 1890ರಲ್ಲಿ ಓರಿಯೆಂಟಲ್ ಲೈಬ್ರರಿಯನ್ನು ಮೈಸೂರಿನಲ್ಲಿ ಸ್ಥಾಪಿಸಿ ರಾಜ್ಯದ ಅಮೂಲ್ಯ ವಾದ ಹಸ್ತಪ್ರತಿಗಳನ್ನು ಅಲ್ಲಿ ಶೇಖರಿಸಿ ಪ್ರಕಟಿಸುವ ಕಾರ್ಯವನ್ನು ಅದಕ್ಕೆ ವಹಿಸಿದರು. ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಕೊಡುವ ಸಲುವಾಗಿ ಮಹಾರಾಣಿಯವರ ಹೆಸರಿನಲ್ಲಿ ಶಾಲೆಯೊಂದನ್ನು ಸ್ಥಾಪಿಸಿದರು. 

	ಪ್ರತಿಭಾವಂತ ಯುವಕರಿಗೆ ಆಡಳಿತದಲ್ಲಿ ಸೇವೆಸಲ್ಲಿಸಲು ಅವಕಾಶ ವನ್ನು ಏರ್ಪಡಿಸುವ ಸಲುವಾಗಿ ಮೈಸೂರು ಸಿವಿಲ್ ಸರ್ವೀಸ್ ಪರೀಕ್ಷೆ ಯನ್ನೂ ಜಾರಿಗೆ ತಂದರು. ಧಾರ್ಮಿಕ ದತ್ತಿಗಳ ಆಡಳಿತದಲ್ಲಿ ಸುಧಾರಣೆ ಗಳನ್ನು ಜಾರಿಗೆ ತಂದು, ಹಣ ಪೋಲಾಗದಂತೆ ನೋಡಿಕೊಂಡರು. ನ್ಯಾಯಾಂಗದಲ್ಲಿ ಬದಲಾವಣೆಗಳನ್ನು ಮಾಡಿ, ರಾಜ್ಯದಲ್ಲಿ ನ್ಯಾಯಕ್ಕೆ ಚ್ಯುತಿ ಬರದಂತೆ ಏರ್ಪಾಡುಮಾಡಿದರು.

	ಸಂಸ್ಥಾನದಲ್ಲಿ ವ್ಯವಸಾಯ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಪ್ರಗತಿ ಯನ್ನು ಸಾಧಿಸಲು ಇವರು ನಾನಾ ಯೋಜನೆಗಳನ್ನು ರೂಪಿಸಿ ಕಾರ್ಯ ರೂಪಕ್ಕೆ ತಂದರು. ಮುಖ್ಯವಾಗಿ ಶಿವಸಮುದ್ರದಲ್ಲಿ ವಿದ್ಯುತ್ ಆಗರವನ್ನು ಸ್ಥಾಪಿಸಿದರು. ನೀರನ್ನು ಬಳಸಿ ವಿದ್ಯುಚ್ಛಕ್ತಿ ಪಡೆಯುವ ಈ ಯಂತ್ರಾಗಾರ ಭಾರತದಲ್ಲೇ ಮೊಟ್ಟಮೊದಲನೆಯದಾಗಿದ್ದು ಅದನ್ನು ಮೈಸೂರು ಸಂಸ್ಥಾನದಲ್ಲಿ ಸ್ಥಾಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇದರ ಸ್ಥಾಪನೆ ಯಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆಗೆ ಮತ್ತು ಕೈಗಾರಿಕೆಗಳ ಅಭಿವೃದ್ಧಿಗೆ ಅನುಕೂಲವಾಯಿತು. ರಾಜ್ಯದ ಮಾರಿಕಣಿವೆಯ ಜಲಾಶಯವನ್ನು ಕಟ್ಟಿಸಿ, ಆ ಪ್ರದೇಶದ ರೈತರಿಗೆ ಅನುಕೂಲವನ್ನು ಮಾಡಿದರು. 

	ಇವರ ಸೇವೆಯನ್ನು ಗಮನಿಸಿದ ಬ್ರಿಟಿಷ್ ಸರ್ಕಾರದವರು ಇವರಿಗೆ ಕೆ.ಸಿ.ಎಸ್.ಐ. ಪದವಿಯನ್ನೂ(1893) ಮೈಸೂರು ಮಹಾರಾಜರು ರಾಜ್ಯದುರಂಧರ ಎಂಬ ಬಿರುದನ್ನೂ ಇತ್ತು ಗೌರವಿಸಿದರು. ಇವರು 1900ರ ಆಗಸ್ಟ್‍ನಲ್ಲಿ ವಿಶ್ರಾಂತಿಪೂರ್ವ ರಜೆಯನ್ನು ಪಡೆದು 1901 ಸೆಪ್ಟೆಂಬರ್‍ನಲ್ಲಿ ನಿಧನರಾದರು. ಮೈಸೂರು ರಾಜ್ಯಕ್ಕೆ ಅತ್ಯುತ್ತಮ ಸೇವೆಸಲ್ಲಿಸಿದ ಇವರ ಆಡಳಿತ ವಿಚಕ್ಷಣೆ ಮತ್ತು ದೂರದರ್ಶಿತ್ವವನ್ನು ಅರಿತಿದ್ದ ಭಾರತದ ವೈಸರಾಯ್ ಆಗಿದ್ದ ಲಾರ್ಡ್ ಹಾರ್ಡಿಂಜರೇ ಸ್ವತಃ ಬೆಂಗಳೂರಿಗೆ ಬಂದು ಇವರ ನೆನಪಿಗಾಗಿ ಕಟ್ಟಿದ್ದ ಒಂದು ಭವನವನ್ನೂ (ಈಗಿನ ಕಬ್ಬನ್ ಪಾರ್ಕ್‍ನಲ್ಲಿರುವ ರಾಜ್ಯ ಕೇಂದ್ರ ಗ್ರಂಥಾಲಯ ಕಟ್ಟಡ) ಇವರ ಪ್ರತಿಮೆಯನ್ನೂ ಅನಾವರಣ ಮಾಡಿದರು.
			
					(ಕೆ.ಟಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ